ಗಾಡ್ವಿನ್ ಆಸ್ಟೆನ್ ಶಿಖರ
ಹಿಮಾಲಯ ಪರ್ವತದ ಶಾಖೆಗಳಲ್ಲೊಂದಾದ ಕಾರಕೋರಂ ಶ್ರೇಣಿಯ ಉನ್ನತ ಶಿಖರಗಳಲ್ಲಿ ಒಂದು. ಇದಕ್ಕೆ ಏ2 (ಕೇಟೂ) ಶಿಖರ ಎಂದೂ ಹೆಸರಿದೆ. ಟಿಬೆಟ್ ಭಾಷೆಯಲ್ಲಿ ಇದರ ಹೆಸರು ದಾಪ್ಸಾಂಗ್. ಶ್ರೀನಗರದಿಂದ ಈಶಾನ್ಯಕ್ಕೆ 256.ಕಿ.ಮೀ ದೂರದಲ್ಲಿದೆ. ವಿಶ್ವದಲ್ಲಿ ಇದು ಎರಡನೆಯ ಉನ್ನತ ಶಿಖರ. ಇದರ ಎತ್ತರ 8,611 ಮೀ. (28,251'). ಮಂಜುಗಡ್ಡೆ ಇದನ್ನು ಸದಾ ಮುಚ್ಚಿರುತ್ತದೆ. ಇದರ ನೆತ್ತಿಯನ್ನು ಮುಟ್ಟುವ ದಾರಿ ಅತ್ಯಂತ ದುರ್ಗಮವಾದ್ದು. 1850ರಲ್ಲಿ ಲೆಫ್ಟೆನೆಂಟ್ ಕರ್ನಲ್ ಹೆನ್ರಿ 

ಹ್ಯಾವರ್ಶ್ಯಾಮ್ ಗಾಡ್ವಿನ್ ಆಸ್ಟೆನ್ (1834 - 1923) ಎಂಬ ಭೂಗೋಳಶಾಸ್ತ್ರಜ್ಞ ಈ ಶಿಖರದ ಸರ್ವೇಕ್ಷಣೆ ಮಾಡಿದ. ಇದಕ್ಕೆ ಅವನ ಹೆಸರೇ ಬಳಕೆಗೆ ಬಂದಿದೆ. ಬಾಲ್ಟೊರೊ ನೀರ್ಗಲ್ಲ ನದಿ ಇಲ್ಲಿ ಉಗಮಿಸುತ್ತದೆ.
ಈ ಶಿಖರವನ್ನೇರಲು ಇಟಲಿಯ ಪರ್ವತಾರೋಹಣ ತಂಡವೊಂದು 1954 ರಲ್ಲಿ ಪ್ರಥಮವಾಗಿ ಪ್ರಯತ್ನಪಟ್ಟಿತು. ಈ ತಂಡದ ನಾಯಕನಾಗಿದ್ದವ ಮಿಲಾನ್ ವಿದ್ಯಾಪೀಠದ 
ಭೂವಿಜ್ಞಾನ ಪ್ರಾಧ್ಯಾಪಕ ಆರ್ಡಿಟೊ ಡೇಸಿಓ. ಅವನ ಅನಂತರ 1955ರಲ್ಲಿ ಜರ್ಮನ್ ಮತ್ತು ಇಂಗ್ಲಿಷ್ ಪರ್ವತಾರೋಹಣ ತಂಡಗಳು ಗಾಡ್ವಿನ್ ಶಿಖರವನ್ನು ಏರಿದುವು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ